ಪೊನ್ನಂಪೇಟೆಯ ಶ್ರೀ ರಾಮ ಕೃಷ್ಣ ಶಾರದಾಶ್ರಮ
 
ಪೊನ್ನಂಪೇಟೆಯ ಶ್ರೀ ರಾಮ ಕೃಷ್ಣ ಶಾರದಾಶ್ರಮ ನಡೆದು ಬಂದ ದಾರಿ

ದಿನಾಂಕ ೭ ಫೆಬ್ರವರಿ ೧೯೨೭, ಕೊಡಗಿನ ಇತಿಹಾಸದಲ್ಲೇ ಅದು ಸುವರ್ಣಾಕ್ಷರದ ದಿನ. ಕಾರಣ ಇಷ್ಟೆ, ನಮ್ಮ ದೇಶದಲ್ಲಿ ೧೯ನೆಯ ಶತಮಾನದಲ್ಲಿ ಅವತರಿಸಿದ ಸರ್ವಧರ್ಮ ಸಮನ್ವಯಾಚಾರ್ಯ, ಅವತಾರ ವರಿಷ್ಠ ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ ಹೆಸರಿನಲ್ಲಿ, ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದರಿಂದ ಸ್ಥಾಪಿಸಲ್ಪಟ್ಟಿದ್ದ ರಾಮಕೃಷ್ಣ ಮಹಾಸಂಘದ ಶಾಖಾ ಸಂಸ್ಥೆ ಪ್ರಾರಂಭಿಸಲು ದಕ್ಷಿಣ ಕೊಡಗಿನ ಪೊನ್ನಂಪೇಟೆಯಲ್ಲಿ ಆಸ್ತಿಭಾರಶಿಲೆ ಹಾಕಿದ ದಿನ. ಇದರ ಹಿನ್ನಲೆ ಪುಟ್ಟದಾದರೂ, ಮಹತ್ವವಾದುದು.


ರಾಮಕೃಷ್ಣ ಮಹಾಸಂಘದ ಸಂನ್ಯಾಸಿಗಳಾಗಿದ್ದ ಸ್ವಾಮಿ ನಿರ್ಮಲಾನಂದರು ಒಮ್ಮೆ ಕೊಡಗಿಗೆ ಬಂದು ಇಂದಿನ ವಿರಾಜಪೇಟೆಯಲ್ಲಿ ವಾಸ್ತವ್ಯ ಹೂಡಿದ್ದರು. ಪೊನ್ನಂಪೇಟೆಯ ಶ್ರೀ ಅಚ್ಚಯ್ಯಂಡ ಕಾಳಮಯ್ಯನವರು ತಮ್ಮ ಗೆಳೆಯರೊಡನೆ ಸ್ವಾಮಿಜಿಯವರನ್ನು ಭೇಟಿ ಮಾಡಿ ಕೊಡಗಿನಲ್ಲಿ ರಾಮಕೃಷ್ಣ ಮಹಾಸಂಘದ ಒಂದು ಶಾಖೆಯನ್ನು ಪ್ರಾರಂಭಿಸಲು ವಿನಂತಿಸಿಕೊಂಡರು. ಮಾತ್ರವಲ್ಲ, ಕಾಳಮಯ್ಯನವರು ಈ ಪುಣ್ಯ ಕಾರ್ಯಕ್ಕೆ ತಮ್ಮ ೧.೫೭ ಎಕರೆ ಸ್ವಂತ ಜಮೀನನ್ನು ಆಶ್ರಮಕ್ಕೆ ದಾನವಾಗಿ ನೀಡುವುದಾಗಿ ಭರವಸೆ ಇತ್ತರು. ಭಾರತದ ಇತಿಹಾಸದಲ್ಲಿ ದೇವಾಲಯ ನಿರ್ಮಾಣ ಅತ್ಯಂತ ಪುಣ್ಯ ಕಾರ್ಯ ಎಂದು ಎಲ್ಲರ ಧೃಢ ನಂಬಿಕೆ. ಅದಕ್ಕಾಗಿ ರಾಜ-ಮಹಾರಾಜಾರಾದಿಯಾಗಿ ಐಶ್ವರ್ಯವಂತರೂ ತಮ್ಮ ತನು, ಮನ, ಧನ ಹಾಗೂ ಸ್ವತ್ತನ್ನು ದೇವಾಲಯ ನಿರ್ಮಾಣದ ಕಾರ್ಯಕ್ಕಾಗಿ ವಿನಿಯೋಗಿಸಲು ಹಾತೊರೆಯುವ ಪರಂಪರೆ ಇದೆ. ಈ ಒಂದು ಸತ್ಪರಿಪಾಠ ಅಂದಿನ ದಿನಗಳಲ್ಲಿ ಕೇವಲ ಎಣಿಸುವಷ್ಟು ಮಂದಿ ಇದ್ದಂತಹ, ದಟ್ಟಕಾಡುಗಳಿಂದ ಸುತ್ತುವರಿದಿದ್ದ ಕುಗ್ರಾಮ ಪೊನ್ನಂಪೇಟೆಯ ನಿವಾಸಿಗಳ ಮನದಲ್ಲಿ ಉದ್ಭವಿಸಿದ್ದು ದೈವಸಂಕಲ್ಪವೇ.

ಗ್ರಾಮದ ಜನರೆಲ್ಲರ ಸಹಕಾರ, ಧನಿಕರ ನೆರವು ಕಾಳಮಯ್ಯನವರ ಸ್ಪೂರ್ಥಿಯ ಫಲವಾಗಿ ಕೇವಲ ನಾಲ್ಕು ತಿಂಗಳ ಅಲ್ಪ ಸಮಯದಲ್ಲೇ ಒಂದು ಚಿಕ್ಕ ಚೊಕ್ಕ ಆಶ್ರಮ ಸಿದ್ಧಗೊಂಡಿತೆಂದು ದಾಖಲೆಗಳು ತಿಳಿಸುತ್ತವೆ. ಪುಟ್ಟ ಪೂಜಾಗೃಹ, ಪ್ರಾರ್ಥನಾಮಂದಿರ, ಉಸ್ತುವಾರಿ ಸಂನ್ಯಾಸಿಗಳಿಗಾಗಿ ಒಂದೆರೆಡು ಕೊಠಡಿ, ಜತೆಗೆ ಚಿಕ್ಕ ಪಾಕಶಾಲೆ ಇವಷ್ಟೂ ಸಿದ್ಧವಾದ ನಂತರ, ಅದೇ ವರ್ಷ (೧೯೨೭) ಜೂನ್ ೧೦ ರಂದು ಸ್ವಾಮಿ ನಿರ್ಮಲಾನಂದರು ಶ್ರೀ ರಾಮಕೃಷ್ಣ ಶಾರದಾಶ್ರಮವನ್ನು ಉದ್ಘಾಟಿಸಿದರು. ಸ್ವಾಮಿ ಶಾಂಭವಾನಂದರ (ಪೂರ್ವಾಶ್ರಮದ ಹೆಸರು ತೇಲಪಂಡ ಚೆಂಗಪ್ಪ) ಹೆಗಲಿಗೆ ಪೊನ್ನಂಪೇಟೆಯ ಆಶ್ರಮದ ಪ್ರಾರಂಭಿಕ ಅಧ್ಯಕ್ಷರಾಗುವ ಜವಾಬ್ದಾರಿ ಬಂದಿತು. ಶ್ರೀ ರಾಮಕೃಷ್ಣ ಪರಮಹಂಸರ ಮಾನಸ ಪುತ್ರರೆಂದೇ ಪ್ರಖ್ಯಾತರಾಗಿದ್ದ ಪರಮ ಪೂಜ್ಯ ಸ್ವಾಮಿ ಬ್ರಹ್ಮಾನಂದಜೀ ಮಹಾರಾಜರಿಂದ ಮಂತ್ರದೀಕ್ಷೆ ಪಡೆದಿದ್ದ ಸ್ವಾಮಿ ಶಾಂಭವಾನಂದರು ದಕ್ಷತೆ, ಸಮಯಪಾಲನೆ, ಕಾರ್ಯತತ್ಪರತೆ, ಸೇವಾಮನೋಭಾವ ಮತ್ತು ಶಿಸ್ತಿನ ಕೆಲಸಗಳಿಗೆ ಹೆಸರಾದರು.

ಕೊಡಗಿನವರೇ ಆಗಿದ್ದರಿಂದ ಸ್ವಾಮಿ ಶಾಂಭವಾನಂದಜೀಯವರಿಗೆ ಸ್ಥಳೀಯ ವಿದ್ಯಾಮಾನಗಳ, ಸಮಸ್ಯೆಗಳ ಪೂರ್ಣ ಅರಿವಿತ್ತು. ಅಲ್ಲದೇ ಸುತ್ತಲ ನಿವಾಸಿಗಳೊಂದಿಗೆ ಅವರ ಆಡು ಭಾಷೆಯಲ್ಲೇ ಸಂಪರ್ಕಿಸುವ ಉತ್ತಮ ಮಾಧ್ಯಮದ ಸೌಕರ್ಯವಿತ್ತು. ಮೊದಲೇ ಕಾಡು ಪ್ರದೇಶ, ವರ್ಷದ ಹೆಚ್ಚು ಭಾಗ ಭೋರ್ಗರೆಯುವ ಮಳೆ ಇವು ಎಲ್ಲ ತರಹದ ಸೊಳ್ಳೆಗಳ ಬೆಳವಣಿಗೆಗೆ ಹೇಳಿ ಮಾಡಿಸಿದಂತಿದ್ದು, ಎಲ್ಲೆಲ್ಲೋ ಭಯಂಕರ ಮಲೇರಿಯ ತಾಂಡವವಾಡುತ್ತಿತ್ತು. ಅಪ್ರಬುದ್ಧ, ಅಸಹಾಯ ಜನರು ಈ ಮಾರಿಗೆ ಸಿಕ್ಕಿ, ನರಳಿ ಬಲಿಯಾಗುತ್ತಿದ್ದರು. ಜೀವನದಲ್ಲಿ ಶಿವನನ್ನು ಕಂಡು ಸೇವಿಸು ಎಂಬ ಶ್ರೀ ರಾಮಕೃಷ್ಣ ಪರಮಹಂಸರ, ಸ್ವಾಮಿ ವಿವೇಕಾನಂದರ ನೂತನ ಮಹಾವೇದವಾಕ್ಯದಿಂದ ಸ್ಫೂರ್ತಿಗೊಂಡಿದ್ದ ಸ್ವಾಮೀಜಿ ಮಲೇರಿಯಾ ನಿರ್ಮೂಲನಕ್ಕಾಗಿ ಪರಿಹಾರ ಹಂತಗಳನ್ನು ಜನರಲ್ಲಿ ಮೂಡಿಸಿ, ಉತ್ತೇಜಿಸಿ, ಅವರನ್ನೂ ಈ ಕಾರ್ಯದಲ್ಲಿ ಭಾಗಿಗಳನ್ನಾಗಿ ಮಾಡುವ ಹೊಸಯತ್ನಕ್ಕಾಗಿ ಇಳಿದರು. ಮಲೇರಿಯ ಜ್ವರ - ಸೊಳ್ಳೆಗಳಿಂದಲೇ, ಅದರ ನಿವಾರಣೆ - ಸೊಳ್ಳೆಗಳ ನಾಶದಿಂದಲೇ ಎಂಬ ಅಂಶ ಗ್ರಾಮೀಣರಿಗೆ ಅರಿವಾಗಿಸಲು ಕೊಡವ ಭಾಷೆಯಲ್ಲಿ “ ಚೊಳ್ಳೆ ಪಾಟ್ ” ಎಂಬ ಪುಟ್ಟ ಕವನವನ್ನೇ ರಚಿಸಿ, ಮುದ್ರಿಸಿ, ಹಳ್ಳಿ ಹಳ್ಳಿಗಳಿಗೂ ನಡೆದುಹೋಗಿ ಕವನವನ್ನು ಜನರಿಗೆ ಹಂಚಿ, ಈ ಹಾಡನ್ನು ಜನರಿಂದ ಹಾಡಿಸಿ ಮಲೇರಿಯಾ ನಿರ್ಮೂಲನ ಕಾರ್ಯದಲ್ಲಿ ಒಂಟಿ ಸೈನಿಕರಂತೆ ಮುನ್ನುಗ್ಗಿದರು. ಅಷ್ಟೇ ಅಲ್ಲ, ಭಾರವಾದ ಮಾಯಾದೀಪ ಹೆಗಲಮೇಲೆ ಹೊತ್ತು ಚಾರುಗಾಜುಗಳ (Glass slides) ಸಹಾಯದಿಂದ ಹಳ್ಳಿಯ ಜನತೆಗೆ ಸೊಳ್ಳೆಯ ದುಷ್ಪರಿಮಾಣಗಳನ್ನು ಸ್ಪಷ್ಟಪದಿಸುವ ಕ್ರಾಂತಿಕಾರಿ ಯೋಜನೆಯನ್ನೇ ಹಾಕಿ ಕೊಂಡರು. ಇದೇ ಶ್ರೀ ರಾಮಕೃಷ್ಣ ಶಾರದಾಶ್ರಮ ತಾನು ಹುಟ್ಟಿದ ಕೆಲವೇ ವರ್ಷಗಳಲ್ಲಿ ಸಾಧಿಸಿದ ಮೊದಲ ಜನಸೇವೆ.

ಆಶ್ರವದ ಪೂಜಾ, ಭಜನೆ, ಉಪನ್ಯಾಸಗಳು, ಶ್ರೀ ರಾಮಕೃಷ್ಣ, ಶ್ರೀಮಾತೆ ಶಾರದಾದೇವಿ, ಸ್ವಾಮಿ ವಿವೇಕಾನಂದರ ಜನ್ಮ ದಿನೋತ್ಸವಗಳು ಮೊದಲಾದ ಧಾರ್ಮಿಕ ಕಾರ್ಯಗಳೂ ಆಶ್ರಮದಲ್ಲಿ ನಡೆಯತ್ತಿದ್ದವು. ಈ ದಿವ್ಯತ್ರಯರ ಜನ್ಮ ತಿಥಿಗಳಂದು ನೂರಾರು ಜನಭಕ್ತರಿಗೆ ಸುತ್ತಲ ಗ್ರಾಮದ ಬಡಜನರಿಗೆ ಅನ್ನದಾನದ ಸೇವಯೂ ನಡೆಯುತ್ತಿತ್ತು. ಭೋಜನಾನಂತರ ಸ್ವಾಮೀಜಿಯವರು ನೊಂದ ಮನಸ್ಸಿನ ಭಕ್ತರ ಮನತಣಿಸಲು ಹರಿಕಥಾ ಕಾರ್ಯಕ್ರಮವನ್ನು ಏರ್ಪಡಿಸಿ ನಮ್ಮ ದೇಶದ ಧಾರ್ಮಿಕ ಪರಂಪರೆಯ ಅರಿವನ್ನೂ ಮೂಡಿಸುತ್ತಿದ್ದರು. ಇದಕ್ಕಾಗಿ ತಗಲುವ ಖರ್ಚಿಗೆ ಗ್ರಾಮಗಳ ಮತ್ತು ಸ್ಥಳೀಯ ನಿವಾಸಿಗಳಿಂದ ಧನ ಹಾಗೂ ಆಹಾರ ಸಾಮಗ್ರಿಗಳನ್ನು ದಾನವಾಗಿ ಪಡೆಯಲು ತಾವೇ ಹಳ್ಳಿ ಹಳ್ಳಿಗೂ ನಡೆದು ಜನ ನೀಡಿದ ದಾನ್ಯ ಸಹಾಯವನ್ನು ಮೂಟೆಗಳಲ್ಲಿ ಸ್ವಯಂಸೇವಕರೊಡನೆ ಹೊತ್ತು ಆಶ್ರಮಕ್ಕೆ ತರುತ್ತಿದ್ದರು.

೧೯೩೨ರಲ್ಲಿ ಪೊನ್ನಂಪೇಟೆಗೆ ಬಂದಿದ್ದ ಪರಮಪೂಜ್ಯ ಸ್ವಾಮಿ ಭೂತೇಶಾನಂದಜಿ ಮಹರಾಜ್ (ಮುಂಬರುವ ವರ್ಷಗಳಲ್ಲಿ ಇವರು ರಾಮಕೃಷ್ಣ ಮಹಾಸಂಘದ ಪರಮಾಧ್ಯಕ್ಷರಾದರು) ಹೀಗೆ ಹೇಳುತ್ತಾರೆ: ಆಶ್ರಮದ ವಾರ್ಷಿಕ ಮಹೋತ್ಸವಗಳು ಕೊಡಗಿನ ಮಹತ್ತರ ನಾಡಹಬ್ಬಗಳನ್ನೇ ಆಚರಿಸುತ್ತಿರುವಂತೆ ನನಗೆ ಅನಿಸಿತು. ಬೇರೆ ಊರುಗಳಿಂದ ಸಮಾರಂಭಕ್ಕೆಂದು ಬಂದ ಜನರು ಸ್ಥಳಾಭಾವ ನಿರ್ಲಕ್ಷಿಸಿ ಎರಡು ದಿನಗಳ ಕಾಲ ಆಶ್ರಮದ ಆವರಣದಲ್ಲಿಯೇ ವಾಸ ಮಾಡಿದರು. ಮಳೆ ಬಂದಾಗಲೂ ಆ ಜನರು ಅದನ್ನು ಲೆಕ್ಕಿಸದೇ ಸದ್ದುಗದ್ದಲವಿಲ್ಲದೇ ನೆಲದಮೇಲೆ ಕುಳಿತು ಉಪನ್ಯಾಸಗಳನ್ನು ಕೇಳಿದರು. ಕೊಡಗಿನವರು ಅತಿಶಿಸ್ತಿನ ಜನರು ಎಂಬುದನ್ನು ಇಲ್ಲಿ ನಾನು ಸ್ವತ: ಕಂಡೆ. ಯಾವ ರೀತಿಯ ಅನಾನುಕೂಲತೆಗಳನ್ನೂ ದೊಡ್ಡದು ಮಾಡದೇ, ಉಪನ್ಯಾಸಕರಿಗೆ ಯಾರೊಬ್ಬರೂ ಸ್ವಲ್ಪವೂ ಆಡಚಣೆ ಮಾಡದೇ ಗಲಾಟೆ ಮಾಡದೇ ಕುಳಿತಿದ್ದನ್ನು ಕಂಡೆ. ಇಲ್ಲಿ ನನಗೆ ಕಣ್ತೆರೆಸಿದ ಅಂಶವೆಂದರೆ “ ಶಿಸ್ತು ಮಾನವನ ಜೀವನದಲ್ಲಿ ಏನನ್ನು ಸಾಧಿಸಬಲ್ಲುದು ”, ಎಂದು.

ಪೊನ್ನಂಪೇಟೆ ಆಶ್ರಮದ ಎರಡನೆಯ ಹೆಗ್ಗುರುತಿನ ಕಾರ್ಯವೇ ಕೊಡಗಿನ ಜೇನು ಉತ್ಪಾದಕರ ಸಹಕಾರ ಸಂಘದ ಸ್ಥಾಪನೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ವರ್ಷವಿಡೀ ಜನರ ಮನಸನ್ನು ಆಕರ್ಷಿಸುವ ನೈಸರ್ಗಿಕ ಸೌಂದರ್ಯದ ಮಡಿಲಲ್ಲಿ ಯಥೇಚ್ಚವಾಗಿ ವಿಧವಿಧವಾದ ಹೂಗಳ ಹಾಗೂ ಕಾಫಿ ಹೂ ಗೊಂಚಲುಗಳ ಪರಿಮಳ ಸ್ವಾಭಾವಿಕವಾಗಿಯೇ ಜೇನು ಹುಳುಗಳನ್ನು ಆಕರ್ಷಿಸುತ್ತಿದ್ದವು. ಮರದ ಕೊಂಬೆಗಳಿಂದ ಜೋತುಬೀಳುತ್ತಿರುವ ಜೇನುಗೂಡುಗಳು ಅವುಗಳಿಂದ ಸೋರಿಹೋಗುವ ಉತ್ತಮ ಗುಣಮಟ್ಟದ ಮಧು ಸ್ವಾಮಿ ಶಾಂಭವಾನಂದರ ಗಮನ ಸೆಳೆದು, “ ಅಯ್ಯೋ ನಿಸರ್ಗದ ಕೊಡುಗೆ ಪೋಲಾಗುತ್ತಿದೆ ” ಎಂದು ಮರುಗಿದರು. ಜೇನು ಕುರುಬರಿಂದ ಜೇನು ಕೃಷಿಯಾಗುತ್ತಿದ್ದರೂ ಅದು ಒಂದು ಸುವ್ಯವಸ್ಥಿತ ರೀತಿಯಲ್ಲಾಗಬೇಕೆಂಬ ಹೊಸ ಹಂಬಲ ಮೂಡಿತು. ಆಧುನಿಕ ಜೇನು ಕೃಷಿ ವಿಧಾನವನ್ನು ಅದಕ್ಕೆ ಉಪಯೋಗಿಸುವ ಉಪಕರಣಗಳನ್ನು ರಾಮಕೃಷ್ಣ ಸಂಘದ ಭಕ್ತರ ನೆರವಿನಿಂದ ಹೊರದೇಶಗಳಿಂದ ತರಿಸಿ, ಜೇನು ಪೆಟ್ಟಿಗೆಗಳನ್ನು ಹಲವೆಡೆ ಇಟ್ಟು ಜೇನು ಕೃಷಿಗೆ ಹೊಸ ಆಯಾಮವನ್ನೇ ನೀಡಿದರು. ಇವರ ಪರಿಶ್ರಮ, ಮಧು ಪೋಲಾಗದೇ ಅತಿ ಹೆಚ್ಚಿನ ಇಳುವರಿಸಾಧಿಸಲು ಆಧುನಿಕ ಉಪಕರಣಗಳನ್ನು ಉಪಯೋಗಿಸಿ ಉತ್ತಮ ಗುಣಮಟ್ಟದ ಶುದ್ಧ ಹಾಗೂ ಆರೋಗ್ಯಕರ ಜೇನುತುಪ್ಪದ ಉತ್ಪಾದನೆಗೆ ನಾಂದಿಯಾಯಿತು.

ಇಂತಹ ಶುದ್ಧ ಜೇನು ಮಾರಾಟವಾಗಿ ಉತ್ಪಾದಕರಿಗೆ ಉತ್ತಮ ಲಾಭ ಸಿಗಬೇಕಾದರೆ ಸಹಕಾರ ಸಂಘದ ಮೂಲಕವೇ ಎಂದರಿತ ಸ್ವಾಮೀಜಿ ಕೊಡಗಿನ ಜೇನು ಮತ್ತು ಮೇಣ ಉತ್ಪಾದಕರ ಸಹಕಾರ ಸಂಘ ಸ್ಥಾಪಿಸಲು ರೂವಾರಿಯಾದರು. ಸಂಘದ ಮೂಲಧ್ಯೇಯ, ಶುದ್ಧ ಮತ್ತು ಉತ್ತಮ ಗುಣದ ಜೇನು ಉತ್ಪಾದನೆ. ಇದು ಶ್ರೀ ರಾಮಕೃಷ್ಣ ಶಾರದಾಶ್ರಮ ವತಿಯಿಂದ ಕೊಡಗಿಗೆ ಮಾತ್ರವಲ್ಲ, ಇಡೀ ನಾಡಿಗೇ ಉತ್ತಮ ಜೇನು ಸಿಗುವಂತೆ ಮಾಡಿದ ಜನಸೇವೆ.

ಸ್ವಾಮಿ ಶಾಂಭವಾನಂದಜೀಯವರು ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾಗಿ ವರ್ಗವಾದ ನಂತರ (೧೯೪೦) ಪೊನ್ನಂಪೇಟೆಯ ಆಶ್ರಮಕ್ಕೆ ಅಧ್ಯಕ್ಷರಾಗಿ ಬಂದ ಪೂಜ್ಯ ಸಂನ್ಯಾಸಿಗಳೆಂದರೆ : ಸ್ವಾಮಿ ಪ್ರಣವೇಶಾನಂದಜೀ, ಸ್ವಾಮಿ ವಿಶ್ವಂಭರಾನಂದಜೀ, ಸ್ವಾಮಿ ಅಮಿತಾನಂದಜೀ, ಸ್ವಾಮಿ ಶ್ರೀದಾನಂದಜೀ, ಸ್ವಾಮಿ ಸಂಪ್ರಜ್ಞಾನಂದಜೀ, ಸ್ವಾಮಿ ವೀತಮೋಹಾನಂದಜೀ, ಸ್ವಾಮಿ ಸುಖಾತ್ಮಾನಂದಜೀ, ಸ್ವಾಮಿ ಕಮಲಾನಂದಜೀ, ಸ್ವಾಮಿ ಪುರುಷೋತ್ತಮಾನಂದಜೀ, ಸ್ವಾಮಿ ಜಗದಾತ್ಮಾನಂದಜೀ, ಹಾಗೂ ಈಗಿರುವ ಸ್ವಾಮಿ ಬೋಧಸ್ವರೂಪಾನಂದಜೀ. ರಾಮಕೃಷ್ಣ ಮಹಾಸಂಘದ ಘನಧ್ಯೇಯ, “ ಆಧ್ಯಾತ್ಮಿಕ ಉನ್ನತಿ ಮತ್ತು ಸಮಾಜ ಕಲ್ಯಾಣ ” (ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯಚ) ಇದನ್ನು ಸಕಾರಾತ್ಮಕವಾಗಿ ನಡೆಸಿಕೊಂಡು ಬಂದು ತಮ್ಮ ಸಹೋದರ ಸಂನ್ಯಾಸಿಗಳ ಅನ್ಯೋನ್ಯ ಸಹಕಾರದಿಂದ ಪೊನ್ನಂಪೇಟೆಗೆ, ಸುತ್ತಲಿನ ಜನರಿಗೆ, ಬುಡಕಟ್ಟು ಜನಾಂಗದವರಿಗೆ ಒಂದಲ್ಲ ಒಂದು ಸಹಾಯವಾಗುವ ಅನೇಕ ಸೇವಾ ಯೋಜನೆಗಳನ್ನು ಇವರುಗಳು ಹಮ್ಮಿಕೊಂಡರು. ಇವುಗಳ ಫಲವಾಗಿಯೇ ಆಶ್ರಮವು ಬಡವ-ಬಲ್ಲಿದರೆನ್ನದೇ ಎಲ್ಲ ಕೋಮಿನ, ಎಲ್ಲ ವರ್ಗದವರಿಗೆ, ಸ್ತ್ರೀ ಪುರುಷರಿಗೆ ಮಾನವ ಸೇವೆಯನ್ನೇ ಪ್ರಮುಖವಾಗಿಟ್ಟು ಪ್ರಾರಂಭಿಸಿದ ಅನೇಕ ರಚನಾತ್ಮಕ ಕಾರ್ಯಗಳೆಂದರೆ : ಅಲೋಪತಿ ಚಿಕಿತ್ಸಾಲಯ, ಒಳರೋಗಿಗಳ ವಿಭಾಗ, ಆರೋಗ್ಯ ತಪಾಸಣಾ ಶಿಬಿರಗಳು, ಪ್ರಕೃತಿ ಕೋಪದಿಂದ ಸಂತ್ರಸ್ತರಾದವರಿಗೆ ಪರಿಹಾರ ಕಾರ್ಯಗಳು, ಮುಂದಿನ ಪೀಳಿಗೆಗೆ ಅನುಕೂಲವಾಗುವಂತೆ ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜನ, ಬಡವಿದ್ಯಾರ್ಥಿಗಳಿಗೆ ಓದಲು ಪ್ರೋತ್ಸಾಹ, ಬೆಳೆಯುವ ಮಕ್ಕಳಿಗೆ ಸನ್ಮಾರ್ಗ ತೋರಲು ವಿವೇಕಾನಂದ ಬಾಲಕ ಸಂಘದ ನಿರ್ವಹಣೆ, ಗ್ರಂಥಭಂಡಾರ, ಹಿರಿಯರ ಹಾಗೂ ಶಾಲಾಕಾಲೇಜುಗಳ ಯುವ-ಯುವತಿಯರಿಗಾಗಿ ಆಧ್ಯಾತ್ಮಿಕ ಶಿಬಿರಗಳು ಇತ್ಯಾದಿ.  ನಮ್ಮ ಜೀವನದ ಶೈಲಿಯನ್ನು ಮತ್ತೆ ನೈಸರ್ಗಿಕ ಆರೋಗ್ಯದೆಡೆಗೆ ಒಯ್ಯುವ ಒಂದು ಔಷಧರಹಿತ ವಿಧಾನವಾದ - ಪ್ರಕೃತಿಚಿಕಿತ್ಸೆ ಹಾಗೂ ಯೋಗದ ಸೌಲಭ್ಯಗಳನ್ನೂ ನೀಡಲಾಗುತ್ತಿದೆ ಆ ಉದ್ದೇಶದಿಂದ ಈ ಆಸ್ಪತ್ರೆಯಲ್ಲಿ ಯೋಗ ಮತ್ತು  ಪ್ರಕೃತಿ ಚಿಕಿತ್ಸಾಲಯ(Naturopathy & Yoga) ತೆರೆಯಲಾಗಿದೆ.  ಹೀಗೆ ಹಲವು ಪ್ರಯೋಜನಾಕಾರಿ ಸೇವಾಕಾರ್ಯಕ್ರಮಗಳ ಮೂಲಕ ಕೊಡಗಿನ ಜನತೆಯ ಕಲ್ಯಾಣಕ್ಕಾಗಿ ಶ್ರೀ ರಾಮಕೃಷ್ಣ ಶಾರದಾಶ್ರಮ ನಿರಂತರವಾಗಿ, ಮೌನವಾಗಿ ಯಾವ ಪ್ರಚಾರ ಮಾಡದೇ ದುಡಿಯುತ್ತಿದೆ.

ಈ ಎಲ್ಲ ಸೇವಾಕಾರ್ಯಗಳ ಸಾಧನೆಗೆ ಕೊಡಗಿನ, ಅದರಲ್ಲೂ ಪೊನ್ನಂಪೇಟೆ ಮತ್ತು ಹತ್ತಿರದ ಗ್ರಾಮಗಳ ನಿವಾಸಿಗಳು ಸದಾ ತಮ್ಮ ನೆರವಿನ ಹಸ್ತ ನೀಡುತ್ತಾ ಬಂದಿದ್ದಾರೆ. ಎಲ್ಲ ಜನೋಪಯೋಗಿ ಯೋಜನೆಗಳನ್ನೂ ಪ್ರೋತ್ಸಾಹಿಸುತ್ತಿದ್ದಾರೆ. ಇದರ ಗುಟ್ಟು ಇಷ್ಟೇ. ಸೇವಾ ಮನೋಭಾವವುಳ್ಳ ಶ್ರೀ ರಾಮಕೃಷ್ಣ-ವಿವೇಕಾನಂದರ ಸೈನಿಕರು ಎಂದೆನಿಸಿರುವ ಸಂನ್ಯಾಸಿಗಳು ಎಲ್ಲ ಧರ್ಮಗಳನ್ನೂ ಗೌರವಿಸುತ್ತಾ ಜನರಲ್ಲಿ ಸಾಕ್ಷಾತ್ ಭಗವಂತನನ್ನೇ ಕಾಣುತ್ತಾ ಜನಸೇವಯೇ ಜನಾರ್ಧನಸೇವ ಎಂಬ ನಿಸ್ವಾರ್ಥ ದೃಷ್ಟಿಯಿಂದ ಜನಸಾಮಾನ್ಯನ ಸೇವೆಯನ್ನು ೮೫ ವಸಂತಗಳಿಂದ ತಮ್ಮ ಅನಾನುಕೂಲತೆಗಳನ್ನೆಲ್ಲ ಬದಿಗಿರಿಸಿ ಸಹೃದಯಮನಸ್ಸಿನಿಂದ ನಡೆಸುತ್ತಾ ಬಂದಿದ್ದಾರೆ.

೧೯೨೭ರಲ್ಲಿ ಶ್ರೀ ಅಚ್ಚಿಯಂಡ ಕಾಳಮಯ್ಯ ಮತ್ತು ಅವರ ಗೆಳೆಯರ ಸಹಕಾರದಿಂದ ಕಟ್ಟಿದ ಆಶ್ರಮದ ಪ್ರಾರ್ಥನಾ ಮಂದಿರ ಎಂಟು ದಶಕಗಳಷ್ಟು ಕಾಲ ಪ್ರಕೃತಿಯ ಏರು ಪೇರುಗಳನ್ನೂ, ವಿಕೋಪಗಳನ್ನೂ ತಾಳ್ಮೆಯಿಂದ ಸಹಿಸಿ ಆಗಾಗ್ಗೆ ತೇಪೆ ಹಾಕುವ ರಿಪೇರಿಗಳು ನಡೆದಿದ್ದರೂ ಶಿಥಿಲ ಸ್ಥಿತಿಯ ಪರಮಾವಧಿಯತ್ತ ಸಾಗುತ್ತಿದ್ದನ್ನು ಗಮನಿಸಿದ್ದ ಆಶ್ರಮದ ಅಧ್ಯಕ್ಷರಾಗಿದ್ದ ಸ್ವಾಮಿ ಜಗದಾತ್ಮಾನಂದಜೀ ಮತ್ತು ಅವರ ಸಂನ್ಯಾಸೀ ಸಹೋದರರು ನೂತನವಾಗಿ ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ ವಿಶ್ವಭಾವೈಕ್ಯ ದೇವಾಲಯ ನಿರ್ಮಿಸಲು ಸಾಹಸ ಯೋಜನೇ ತಯಾರಿಸಿದಾಗ ಸಂನ್ಯಾಸಿಗಳ ನಿಸ್ಪೃಹ ಸೇವಾಕಾರ್ಯಗಳನ್ನು ಗಮನಿಸಿದ್ದ ಪೊನ್ನಂಪೇಟೆಯ, ಅದರ ಸುತ್ತಮುತ್ತಲಿನ ನಿವಾಸಿಗಳು, ಕೊಡಗು ಜಿಲ್ಲೆಯ ನಿವಾಸಿಗಳು ಮಾತ್ರವಲ್ಲ, ಹೊರಜಿಲ್ಲೆಗಳ, ಹೊರರಾಜ್ಯಗಳ, ಬೆಂಗಳೂರು, ಮಂಗಳೂರು, ಮುಂಬಯಿ, ಪುಣೆ, ಚೆನ್ನೈ, ಕಲ್ಕತ್ತಾ, ಡೆಲ್ಲಿ, ಹೈದರಾಬಾದ್, ಮೈಸೂರು ಇತ್ಯಾದಿ ನಗರಗಳಲ್ಲಿ ನೆಲೆಸಿರುವ ದಿವ್ಯತ್ರಯರ ಭಕ್ತರು, ಅನೇಕ ಕೈಗಾರಿಕಾ ಉದ್ಯಮಿಗಳು, ಐಟಿ ಸಂಸ್ಥೆಗಳು, ಸರ್ಕಾರಿ ಹಾಗೂ ಖಾಸಗೀ ಸಂಸ್ಥೆಗಳು, ಜನಸಾಮಾನ್ಯರೂ ನೀಡಿರುವ ಸಹಾಯಧನದ ಪ್ರೋತ್ಸಾಹದ ಫಲವಾಗಿ ನೂತನ ವಿಶ್ವಭಾವೈಕ್ಯ ದೇವಾಲಯ ಸಿದ್ಧವಾಗಿದ್ದು, ಇದನ್ನು ಶ್ರೀ ರಾಮಕೃಷ್ಣ ಮಠ ಮತ್ತು ಶ್ರೀ ರಾಮಕೃಷ್ಣ ಮಹಾಸಂಘದ ಪರಮಾಧ್ಯಕ್ಷರಾದ ಪರಮಪೂಜ್ಯ ಸ್ವಾಮಿ ಆತ್ಮಸ್ಥಾನಂದಜೀ ಮಹರಾಜ್ ರವರು ೨೦೧೦ ನೇ ಇಸವಿ ಅಕ್ಟೋಬರ್ ರಂದು ಉದ್ಘಾಟಿಸಿದರು. ಈ ಶುಭಸಮಾರಂಭ ಅಕ್ಟೋಬರ್ ನ ೨೬, ೨೭, ಮತ್ತು ೨೮ನೇ ತಾರೀಖುಗಳವರೆಗೆ ವಿಸ್ತಾರಗೊಂಡಿದ್ದವು. ದೇಶದ ಅನೇಕ ಆಶ್ರಮದ ಶಾಖಾ ಸಂಸ್ಥೆಗಳಿಂದ ಸುಮಾರು ೧೮೦ ಸಂನ್ಯಾಸಿಗಳು ಈ ಶುಭಸಮಾರಂಭಕ್ಕೆ ಸಾಕ್ಷಿಯಾದರು. ಹಾಗೆಯೇ ನಾಡಿನ ಮತ್ತು ಹೊರಗಿನಿಂದ ಸುಮಾರು ೫೦೦೦ ಭಕ್ತರು ಭಾಗವಹಿಸಿದ್ದರು. ಊರಿನ ಸರ್ಕಾರಿ ಹಾಗೂ ಇತರ ಸಂಘಸಂಸ್ಥೆಗಳ, ಹಾಗೂ ಸ್ಥಳೀಯರ ಸಹಕಾರದಿಂದ ಈ ಶುಭಕಾರ್ಯವು ಯಶಸ್ವಿಯಾಗಿ ನೆರವೇರಿತು. ಈ ಜನಸ್ತೋಮ ಉಳಿದುಕೊಳ್ಳಲು ಪೊನ್ನಂಪೇಟೆಯ ಮತ್ತು ಸುತ್ತಲಿನ ಅನೇಕ ಭಕ್ತರು, ಜನಸಾಮಾನ್ಯರು ಮುಂದೆ ಬಂದು ತಮ್ಮ ಮನೆಗಳಲ್ಲಿ ಸಾಧ್ಯವಾದಷ್ಟು ಪ್ರತಿನಿಧಿಗಳಿಗೆ ಆಶ್ರಯ ಕೊಡಲು ಮತ್ತು ಅವರ ಓಡಾಟಕ್ಕೆ ತಮ್ಮ ಸ್ವಂತ ವಾಹನಗಳನ್ನೂ ಸಹ ಕೊಡಲು ಮುಂದೆ ಬಂದಿದ್ದು ಶ್ಲಾಘನೀಯ. ಅನೇಕ ಶಾಲಾ ಕಾಲೇಜುಗಳು ತಮ್ಮಲ್ಲಿ ಭಕ್ತರ ಬಿಡಾರಕ್ಕೆ ಅನುವುಮಾಡಿದ್ದು ಆ ವಿದ್ಯಾಸಂಸ್ಥೆಗಳ ಮುಖ್ಯಸ್ಥರು, ಆಡಳಿತ ಮಂಡಳಿಯ ಸದಸ್ಯರು ಆಶ್ರಮದ ಮೇಲೆ ಇಟ್ಟಿರುವ ಪ್ರೀತಿಯ ದ್ಯೋತಕ.

 

Related Links
History of Ponnampet Ashrama
About Kodagu District
Ramakrishna Math & Mission
Past Presidents of Ashrama
 
Home Contact Us